ತೋಯನೈಟ್ -
 
ವಿಕಿರಣಪಟು ಖನಿಜ; ಇದರ ಆದರ್ಶೀಕೃತ ಸಂಯೋಜನೆ ಖಿhಔ2 (ತೋರಿಯಮ್ ಆಕ್ಸೈಡ್). ಇದರ ಜೊತೆಯಲ್ಲಿ ಯುರೇನಿಯಮ್ ಆಕ್ಸೈಡ್ (Uಔ2) ಘನ ದ್ರಾವಣ ರೂಪದಲ್ಲಿ ಸಂಯೋಜಿತವಾಗಿರುತ್ತದೆ. ಸೀರಿಯಮ್, ಲ್ಯಾಂಥನಮ್ ಎಂಬ ಅಪರೂಪ ಧಾತುಗಳ ಆಕ್ಸೈಡುಗಳು ಮತ್ತು ಸೀಸದ ಆಕ್ಸೈಡ್ (Pbಔ) ಸಹ ಕೊಂಚ ಪ್ರಮಾಣದಲ್ಲಿ ಇದರಲ್ಲಿ ಬೆರೆತಿರುತ್ತವೆ. ತೋರಿಯನೈಟ್ ಐಸೊಮೆಟ್ರಿಕ್ ವರ್ಗದ ಹರಳುಗಳಾಗಿ ಆರು ಮುಖಗಳಿರುವ ಘನಾಕೃತಿಯ ರೂಪದಲ್ಲಿಯೂ ಎಂಟು ಮುಖಗಳಿರುವ ಅಷ್ಟಫಲಕದ ರೂಪದಲ್ಲಿಯೂ ಮೈದೆಳೆಯುತ್ತದೆ. ಇದರ ಬಣ್ಣ ಕಪ್ಪು ಕಂದು ಮಿಶ್ರ, ಕಪ್ಪು ಅಥವಾ ಹಸುರು ಮಿಶ್ರ ಬೂದಿ. ಹೊಳಪಿನಲ್ಲಿ ಲೋಹಗಳನ್ನು ಹೋಲುತ್ತದೆ.  ಒಡೆದರೆ ಸೀಳುಗಳು ಶಂಖಾಕೃತಿಯಲ್ಲಿ ಇರಬಹುದು ಅಥವಾ ಅಸಮವಾಗಿರಬಹುದು. ಕಾಠಿನ್ಯಾಂಕ 6.5 ರಿಂದ 7.  ಸಾಪೇಕ್ಷ ಸಾಂದ್ರತೆ 9.8.  ಇದು ಅಗ್ನಿಶಿಲೆಗಳಾದ ಪೆಗ್ಮೆಟೈಟ್ ಸಿರಗಳಲ್ಲಿ ಮೂಲ ಖನಿಜವಾಗಿ ಜನಿಸುತ್ತದೆ. ಭೂಮಿಯ ಹಲವು ಭಾಗಗಳಲ್ಲಿ ಇದು ದೊರೆಯುವುದು. ಶ್ರೀಲಂಕಾ ದ್ವೀಪದ ಗಾಲೆ, ಕೊಂಡರಾಗುಲ, ಬಾಲೆಂಗೋಡ ಜಿಲ್ಲೆಗಳಲ್ಲಿ ನಶಿಸಿದ ಪೆಗ್ಮೆಟೈಟ್ ಸಿರಗಳ ಬದಿಯಲ್ಲಿ, ಹರಿಯುವ ನದಿಗಳ ಗರಸಿನಲ್ಲಿ ತೋರಿಯನೈಟ್ ಉಂಟು. ಮಡಗಾಸ್ಕರಿನಲ್ಲಿ ಮೆಕ್ಕಲು ಮಣ್ಣಿನಲ್ಲಿ ಸಿಕ್ಕುತ್ತದೆ.  ಸೈಬೀರಿಯ ಕೆನಡ, ಮತ್ತು ಅಮೆರಿಕದ ಕೆಲವೆಡೆಗಳಲ್ಲಿ ಸಹ ದೊರೆಯುತ್ತದೆ. ಇದು ಅಗ್ನಿನಿರೋಧಕ ಖನಿಜ; ಆದರೆ ತೀರ ಅಲ್ಪ ಪ್ರಮಾಣದಲ್ಲಿ ದೊರೆಯುವುದರಿಂದ ಇದನ್ನು ಯಾವ ಕೈಗಾರಿಕೆಯಲ್ಲೂ ಉಪಯೋಗಿಸುತ್ತಿಲ್ಲ. ಇದರಲ್ಲಿ ಅಡಗಿಕೊಂಡಿರುವ ಹೀಲಿಯಮ್ಮಿನ ಸಹಾಯದಿಂದ ಶಿಲೆಗಳ ವಯಸ್ಸನ್ನು ನಿರ್ಧರಿಸಲು ವಿe್ಞÁನಿಗಳು ಇದನ್ನು ಉಪಯೋಗಿಸುತ್ತಾರೆ.
(ಸಿ.ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ